ಕಾಲಲೇಖಿ ಮತ್ತು ಕಾಲಮಾಪಿ

	ಒಂದು ಘಟನೆಯ ಸಂಭವಕಾಲವನ್ನು ಖಚಿತವಾಗಿ ಬರೆದಿಡಲು ಅಥವಾ ಗುರುತು ಮಾಡಲು ಬಳಸುವ ಉಪಕರಣ ಕಾಲಲೇಖಿ (ಕ್ರೋನೋಗ್ರಾಫ್). ವಿಶೇಷವಾಗಿ ಸಮುದ್ದನೌಕೆಗಳಲ್ಲಿ ಕಾಲವನ್ನು ನಿಷ್ಕøಷ್ಟವಾಗಿ ಅಳೆಯಲು ಬಲಸುವ ಬಲು ದೊಡ್ಡ ಮತ್ತು ಸುಭದ್ರವಾಗಿ ರಚಿಸಲಾಗಿರುವ ಗಡಿಯಾರ ಕಾಲಮಾಪಿ (ಕ್ರೋನೋ ಮೀಟರ್), ಯಾವುದೇ ಸೂಕ್ಷ್ಮ ಗಡಿಯಾರವನ್ನೂ ಕಾಲಮಾಪಿ ಎಂದೇ ರೂಢಿಯಲ್ಲಿ ಕರೆಯುವುದುಂಟು.

	ಕ್ರಮಾಗತವಾಗಿ ಸಂಭವಿಸುವ ಎರಡು ಘಟನೆಗಳ ಕಾಲಗಳ ಅಂತರವನ್ನು ನಿಖರವಾಗಿ ನಕ್ಷೆಯ ಮೂಲಕ ಕಾಲಲೇಖಿ ತೋರಿಸುತ್ತದೆ. ವಸ್ತುಗಳ ಚಲನದರವನ್ನು ಇದರ ನೆರವಿನಿಂದ ನಿಖರವಾಗಿ ಅಳೆಯಬಹುದು. ಕೆಲವು ಕಾಲಮಾಪಿಗಳು ಮಿನಿಟು, ಸೆಕೆಂಡು ಅಥವಾ ಅದರ ಭಾಗಾಂಶಗಳನ್ನು ತೋರಿಸಬಲ್ಲುವು; ಮತ್ತೆ ಕೆಲವು ದಿವಸ, ತಿಂಗಳು, ವರ್ಷ ಮತ್ತು ಚಂದ್ರನ ವಿವಿಧ ಅವಸ್ಥೆಗಳನ್ನು ಸೂಚಿಸಬಲ್ಲುವು. ಕಾಲಮಾಪಿ ಗಡಿಯಾರದಂತೆ ಜರುಗಿದ ಕಾಲದ ಸರಾಸರಿಯನ್ನು ಸೂಚಿಸುವುದರ ಜೊತೆಗೆ ಇನ್ನೂ ಅನೇಕ ಕಾರ್ಯಗಳನ್ನು ಮಾಡಬಲ್ಲದು.

	ಆಟದ ಮೈದಾನದಲ್ಲಿ ಯಾವುದಾದರೂ ಆಟ ಜರುಗುವ ಕಾಲ ಅಥವಾ ಓಟಗಾರ ಓಡಿದ ಕಾಲ ಇವನ್ನು ಅಳೆಯುವ ಉಪಯೋಗಿಸುವ ನಿಲ್ಗಡಿಯಾರ (ಸ್ಟಾಪ್‍ವಾಚ್) ಕಾಲಮಾಪಿಯ ಒಂದು ವಿಧ.  ವಿಮಾನ ಒಂದು ನಿಲ್ದಾಣದಿಂದ ಹೊರಟು ಮುಂದಿನ ನಿಲ್ದಾಣವನ್ನು ತಲುಪುವ ವರೆಗಿನ ಅಂದರೆ ಅದು ಹಾರಾಡಿದ ಕಾಲವನ್ನು ಅಳೆಯಲು ವಿಮಾನ ಚಾಲಕ ಇಂಥ ಒಂದು ನಿಲ್ಗಡಿಯಾರವನ್ನು ಬಳಸುತ್ತಾನೆ.  ವಿಮಾನ ಹೊರಟಾಗ ಇದರ ಗುಂಡಿ ಒತ್ತಿದರೆ ಕಾಲಮಾಪನ ಆರಂಭವಾಗುತ್ತದೆ. ಗುರಿ ತಲುಪಿದೊಡನೆ ಪುನಃ ಗುಂಡಿ ಒತ್ತಿದಾಗ ಗಡಿಯಾರ ನಿಲ್ಲುವುದು.  ಇವೆರಡು ಗುರುತುಗಳ ಅಂತರವೇ ವಿಮಾನ ಹಾರಿದ ಕಾಲ.

	ವಿಮಾನ ಚಲಿಸುವಾಗ ಭೂಮಿಗೆ ಹೋಲಿಸಿದಂತೆ ಅದರ ಚಲನದರವನ್ನು ಕಂಡು ಹಿಡಿಯಲು ಚಾಲಕರು ಕಾಲಮಾಪಿಯನ್ನು ಉಪಯೋಗಿಸುವರು. ಗೊತ್ತಾದ ಎರಡು ಸ್ಥಳಗಳಿಗಿರುವ ದೂರವನ್ನು ಚಲಿಸಲು ತೆಗೆದುಕೊಂಡ ಕಾಲವನ್ನು ಅಳತೆ ಮಾಡಿ ವಿಮಾನದ ಚಲನದರ ಎಷ್ಟೆಂದು ತಿಳಿಯಬಹುದು. ಅಂದರೆ ಕಾಲ ಮತ್ತು ದೂರ ಗೊತ್ತಿದ್ದರೆ ಚಲನದರ ತಿಳಿಯಬಹುದು. ಅಥವಾ ಚಲನದರ ಮತ್ತು ದೂರಗಳನ್ನು ಅಳೆದು ಕಾಲವನ್ನು ತಿಳಿಯಬಹುದು.

	ವೈದ್ಯರು ರೋಗಿಯ ನಾಡಿಮಿಡಿತದ ಅವಧಿಯನ್ನು ಕಣ್ಣಿಂದ ನೋಡುವುದರಿಂದಲೇ ತಿಳಿಯಬಲ್ಲ ಮತ್ತೊಂದು ರೀತಿಯ ಕಾಲಮಾಪಿ ಇದೆ. ಮೊಟ್ಟ ಮೊದಲಿಗೆ 1680 ರಲ್ಲಿ ಡೇನಿಯಲ್ ಕ್ವಾರೆ ಎಂಬ ಇಂಗ್ಲಿಷ್ ವಿಜ್ಞಾನಿ ಕಾಲಮಾಪಿಯನ್ನು ನಿರ್ಮಿಸಿದ. ಇದು ಒಂದು ಸನ್ನೆಯನ್ನು ತಳ್ಳುವುದರಿಂದ ಗಂಟೆಗೆ ಒಮ್ಮೆ ಶಬ್ದಮಾಡುತ್ತಿತ್ತು. ಇದರ ಆಧುನಿಕ ಮಾರ್ಪಾಡೇ ನಮ್ಮ ಅಲಾರಂ ಗಡಿಯಾರ.

	ಕಾಲಮಾಪಿಗಳಲ್ಲಿರುವ ಹಲವಾರು ವಿಧಗಳನ್ನು ಈ ಕೆಲಕಂಡ ತತ್ವಗಳನ್ನು ಅನುಸರಿಸಿ ರಚಿಸಲಾಗಿದೆ ;

	1. ಹೆಚ್ಚು ಉದ್ದದ ಕಾಲಗಳನ್ನು, ಸೌರವ್ಯೂಹದಲ್ಲಿ ಸೂರ್ಯನ ಸುತ್ತ ಪರಿಭ್ರಮಿಸುತ್ತಿರುವ ಗ್ರಹಗಳು ಅವುಗಳ ಅಕ್ಷದ ಸುತ್ತ ಆವರ್ತಿಸಲು ತೆಗೆದುಕೊಳ್ಳುವ ಕಾಲದಿಂದ ತಿಳಿಯಬಹುದು. ಈ ದೃಷ್ಟಿಯಲ್ಲಿ ಭೂಮಿಯೇ ಒಂದು ಕಾಲಮಾಪಿ.

	2. ಭೂಮಿಯ ಗುರುತ್ವ ವೇಗೋತ್ಕರ್ಷದಿಂದ ನಿಯಂತ್ರಿಸಲ್ಪಟ್ಟ ಆಂದೋಳನಗಳನ್ನು ಉಂಟುಮಾಡುವ ಸಾಧನಗಳನ್ನು ಕಾಲಮಾಪಿಗಳನ್ನಾಗಿ ಉಪಯೋಗಿಸಬಹುದು. ಉದಾಹರಣೆಗೆ (i)ರೋಲಕಗಳು, (ii)ನೀರುಗಡಿಯಾರಗಳು, (iii) ಪುರಾತನ ಮರುಳು ಗಡಿಯಾರಗಳು.

	3. ವಸ್ತುಗಳ ಸ್ಥಿತಿಸ್ಥಾಪಕತ್ವ ಗುಣಗಳನ್ನು ಅನುಸರಿಸಿ ಆಂದೋಳನಗೊಳ್ಳುವ ಸಾಧನಗಳಿಂದಲೂ ಕಾಲಮಾಪಿಗಳನ್ನು ನಿರ್ಮಿಸಬಹುದು. ಉದಾಹರಣೆಗೆ (i) ಅಂದೋಲಿಸುವ ಪೀಪಿಗಳು, (ii) ಶೃತಿಕವಲುಗಳು, (iii) ಕ್ವಾಟ್ರ್ಸ್‍ಸ್ಫಟಿಕಗಳ ಆಂದೋಳನ. (iv) ಕೈಗಡಿಯಾರ ನಿಲ್ಗಡಿಯಾರಗಳಲ್ಲಿ ಉಪಯೋಗಿಸುವ ಸಮತೋಲನ ಚಕ್ರಗಳು.

	4 ವಿದ್ಯುತ್ ಸಂಗ್ರಾಹಕದಲ್ಲಿರುವ (ಕಂಡೆನ್ಸರ್) ವಿದ್ಯುದಂಶ ಕಡಿಮೆಯಾಗುತ್ತಿರುವುದರ ಮತ್ತು ರೋಧ, ಸಂಗ್ರಾಹಕ ಹಾಗೂ ವಿದ್ಯುತ್ ಚೋದಕ (ಇಂಡಕ್ಟರ್) ಜೊತೆ ಸೇರಿರುವ ವಿದ್ಯುನ್ಮಂಡಲದ ವಿದ್ಯುತ್ ಅನುರಣನ ಆಂದೋಳನಗಳನ್ನು ಉಪಯೋಗಿಸಿಕೊಂಡು ಪ್ರಯೋಗಶಾಲೆಯಲ್ಲಿ ಅತಿಕಡಿಮೆ ಕಾಲದ ಅಂತರಗಳನ್ನು ಅಳೆಯಲು ಸಾಧ್ಯ. ಇವು ವಿದ್ಯುತ್ ಕಾಲಮಾಪಿಗಳು.

	5 ಅಣು ಅಥವಾ ಪರಮಾಣುಗಳ ಆಂದೋಳನಗಳ ಮೇಲೆ ಅಳವಡಿಸಿ ರಚಿಸಿರುವ ಪರಮಾಣು ಕಾಲಮಾಪಿಗಳಿವೆ. ಇವುಗಳಿಗೆ ಪರಮಾಣು ಗಡಿಯಾರಗಳೆಂದು ಹೆಸರು.

	6 ರೇಡಿಯೋ ಅಲೆಗಳನ್ನು ಕುಳಿ ಅನುರಣಕಗಳಲ್ಲಿ (ಕ್ಯಾವಿಟಿ ರೆಸೊನೇಟರ್ಸ್) ಅತ್ತಿಂದಿತ್ತ ಚಲಿಸುವಂತೆ ಮಾಡಿದರೆ ಅನುರಣಕದಿಂದ ಯಾವುದೋ ಒಂದು ನಿರ್ದಿಷ್ಟ ಆವರ್ತಾಂಕದಲ್ಲಿ ವಿದ್ಯುತ್ಕಾಂತ ಶಕ್ತಿ ಹೊರಹೊಮ್ಮುವುದು. ಇದನ್ನು ಉಪಯೋಗಿಸಿಕೊಂಡು ಅಲ್ಪಕಾಲಾಂತರಗಳನ್ನು ಅಳೆಯಬಹುದು. ಬೆಳಕಿನ ವೇಗಕ್ಕೂ ಯಾವುದಾದರೂ ತಂತಿಯಲ್ಲಿನ ವಿದ್ಯುತ್ಪ್ರವಾಹದ ವೇಗಕ್ಕೂ ಇರುವ ವ್ಯತ್ಯಾಸವನ್ನು ಉಪಯೋಗಿಸಿ ಅತ್ಯಂತ ಅಲ್ಪಕಾಲಗಳನ್ನು ಅಳೆಯಬಹುದು. ಅಷ್ಟೇ ಅಲ್ಲದೆ ಬೇರೆ ಬೇರೆ ಉದ್ದದ ಎರಡು ತಂತಿಗಳ ಮೂಲಕ ವಿದ್ಯುತ್ಪ್ರವಾಹ ಹರಿಯಲು ತೆಗೆದುಕೊಂಡ ಕಾಲಗಳ ಅಂತರಗಳಿಂದಲೂ ಅತ್ಯಂತ ಅಲ್ಪಕಾಲಗಳನ್ನು ಅಳಯಬಹುದು. ಇವೆಲ್ಲವುಗಳಿಗೂ ಎಲೆಕ್ಟ್ರಾನಿಕ್ ಕಾಲಮಾಪಿಗಳೆಂದು ಹೆಸರು.

	7 ಒಂದು ವಸ್ತುವಿನ ಆವರ್ತನದರವನ್ನು ಕಾಲದ ಅಂತರ ತಿಳಿಯಲು ಉಪಯೋಗಿಸಬಹುದು. ಆವರ್ತಿಸುತ್ತಿರುವ ಒಂದು ವಸ್ತುವಿನ ಮೇಲೆ ಕನ್ನಡಿಯೊಂದನ್ನು ಜೋಡಿಸಿಟ್ಟು ಅದು ಒಂದು ನಿರ್ದಿಷ್ಟ ಸ್ಥಾನಕ್ಕೆ ಬಂದಾಗ ಮಾತ್ರ ಬೆಳಕಿನ ಕಿರಣ ಪ್ರತಿಫಲಿಸುವಂತೆ ಏರ್ಪಡಿಸಿರುತ್ತಾರೆ. ಪ್ರತಿಫಲಿತ ಬೆಳಕು ಒಂದು ದ್ಯುತಿವಿದ್ಯತ್ ಕೋಶದ ಮೇಲೆ ಕೇಂದ್ರಿಕೃತವಾಗುವಂತೆ ಮಾಡಿದರೆ ಅದರಿಂದ ವಿದ್ಯುತ್ ಸ್ಪಂದನ ಉತ್ಪತ್ತಿಯಾಗುವುದು. ಈ ಸ್ಪಂದನಗಲ ಕಾಲಾಂತರ ವಸ್ತುವಿನ ಆವರ್ತನದರವನ್ನು ಅವಲಂಬಿಸಿರುವುದು. ಅತ್ಯಲ್ಪಕಾಲಮಾಪಿಗಳನ್ನು ಈ ಪ್ರಕಾರ ರಚಿಸಬಹುದು.

	ವೇಗ ಕಾಲಲೇಖಿ; ಗೊತ್ತಾದ ಎರಡು ಸ್ಥಳಗಳನ್ನು ಹಾದುಹೋಗುತ್ತಿರುವ ವಸ್ತುವಿನ ಚಲನದರವನ್ನು ಅಳೆಯಲು ಉಪಯೊಗಿಸುವ ಉಪಕರಣ (ವೆಲಾಸಿಟಿ ಕ್ರೋನೋಗ್ರಾಫ್). ಚಲಿಸುತ್ತಿರುವ ಮೋಟಾರು ಗಾಡಿಗಳ ವೇಗವನ್ನು ಅಳೆಯಲು ಪೊಲೀಸಿನವರು ಇಂಥ ಒಂದು ಸಾಧನ ಬಳಸುವರು. ಗಾಳಿತುಂಬಿದ ಕೊಳವೆಯನ್ನು ರಸ್ತೆಗೆ ಅಡ್ಡಲಾಗಿ ಇಟ್ಟಿರುತ್ತಾರೆ. ಒಂದು ವಾಹನ ಅದರ ಮೇಲೆ ಚಲಿಸಿದಾಗ ಗಾಳಿತುಂಬಿದ ಕೊಳವೆಯಲ್ಲಿ ಉತ್ಪತ್ತಿಯಾದ ಹೆಚ್ಚು ಒತ್ತಡದಿಂದ ಒಂದು ಗಡಿಯಾರ ಪ್ರಾರಂಭವಾಗಿ ವಾಹನ ಅದನ್ನು ಬಿಟ್ಟ ಕೂಡಲೆ ಒತ್ತಡ ಕಡಿಮೆಯಾಗಿ ಗಡಿಯಾರ ನಿಲ್ಲುತ್ತದೆ. ಇಂಥ ಕಾಲಲೇಖಿಗಳಿಂದ ವಾಹನಗಳ ವೇಗಗಳನ್ನು ನಿರ್ಧರಿಸುತ್ತಾರೆ.
(ಪಿ.ವಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ